ಸಮಾಜಮುಖಿ ಚಿಂತನೆಯೇ ಗಣೇಶೋತ್ಸವದ ಗುರಿ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಶಿಕ್ಷಣದ ಮೂಲಕ ಅಂತರಂಗದ ಸೌಂದರ್ಯ ವೃದ್ಧಿಸಬೇಕು. ಪರಿಸರ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಜಾಗೃತವಾಗಿ ಸಮಾಜಮುಖಿ ಚಿಂತನೆ ಮಾಡುವಂತಾದಾಗ ಅಂತರಂಗದ ಸೌಂದರ್ಯ ಜಾಗೃತವಾದಂತೆ. ಅಹಂಕಾರ ಮತ್ತು ಮಮಕಾರ ಎರಡರಿಂದ ಮುಕ್ತವಾಗಬೇಕು. ತಂದೆ ತಾಯಿಯರನ್ನು ನೋಯಿಸುವುದಿಲ್ಲ. ಕಲಿಸಿದ ಗುರುಗಳನ್ನು ನೋಯಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ ನಡೆಸುವುದು ಸಾಧ್ಯವಾದರೆ ಸೌಂದರ್ಯ ವಿಕಸಿಸಿದಂತೆ. ದೇಶಕ್ಕಾಗಿ ಯಾವ ಬಲಿದಾನಕ್ಕೂ ಸಿದ್ಧರಾಗಬೇಕು ಎಂದು ಕರ್ನಾಟಕ ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನುಡಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ವತಿಯಿಂದ ನಡೆದ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಮಂಜುಸ್ಕಂದ ಮತ್ತು ಸಿ.ಎಂ.ಅಕ್ಷಯ ಗಣಪತಿಯ ವಿಷಯವಾಗಿ ಮಾತನಾಡಿದರು.
ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿ ಸ್ವಾಗತಿಸಿ ಪ್ರೌಢಶಾಲೆಯ ಅಧ್ಯಾಪಕರಾದ ನಾಗರಾಜ ಖಾರ್ವಿ ವಂದಿಸಿದರು.
ವಿದ್ಯಾಸಂಸ್ಥೆಗಳ ಸಂಚಾಲಕ ಯಂ. ಈಶ್ವರ ಭಟ್, ರೆಕ್ಟರ್ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಅಧ್ಯಾಪಕ ಶಿವಕುಮಾರ್ ಯಂ. ಕಾರ್ಯಕ್ರಮ ನಿರ್ವಹಿಸಿದರು.