ಶ್ರೀ ವಿದ್ಯಾಗಣಪತಿ ಮಹೋತ್ಸವ : ಸಭಾ ಕಾರ್ಯಕ್ರಮ
ಜೀವನದಲ್ಲಿ ಧ್ಯಾನವು ಮಹತ್ವದ ಪಾತ್ರ ವಹಿಸುತ್ತದೆ. ಧ್ಯಾನದಿಂದ ಭಗವಂತನ ಸಾನಿಧ್ಯ ದೊರೆಯುತ್ತದೆ. ತನ್ಮೂಲಕ ಭಗವಂತ ಭವಸಾಗರ ದಾಟಿಸುತ್ತಾನೆ. ವಿದ್ಯಾರ್ಥಿಗಳಿಗೆ ಸರಿಯಾದ ಸತ್ಸಂಗ ದೊರೆತರೆ ಸುಪ್ತವಾಗಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳುತ್ತದೆ ಎಂದು ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳು ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಮೋಹನ್ ಆರ್. ಮೆಂಡನ್ ಇವರು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಗಣೇಶ ಚತುರ್ಥಿಯ 2ನೇ ದಿನ ದಿನಾಂಕ 18-09-2015 ಶುಕ್ರವಾರ ಪೂರ್ವಾಹ್ನದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ನಮ್ಮ ಪ್ರಾರ್ಥನೆ ಬೇರೆಯವರ ಸಲುವಾಗಿ ಇದ್ದಾಗ ಭಗವಂತ ಖಂಡಿತವಾಗಿ ಫಲ ನೀಡುತ್ತಾನೆ ಎಂದು ಉಡುಪಿ ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಶೈಕ್ಷಣಿಕ ಸಂಯೋಜಕಿಯಾದ ಶ್ರೀಮತಿ ಶಶಿಕಲಾ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಯಂ. ಈಶ್ವರ ಭಟ್ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮತ್ತು ನಿವೃತ್ತ ಪ್ರಾಂಶುಪಾಲರಾದ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ವಂದಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಧರ್ ಕೆ. ನಿರೂಪಿಸಿದರು.