ಹೆಚ್ಚುವರಿ ತರಗತಿ ಕೊಠಡಿಯ ಶಂಕುಸ್ಥಾಪನಾ ಸಮಾರಂಭ
ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಇಲ್ಲಿನ ವಿದ್ಯಾಸಂಸ್ಥೆಗೆ ಒಂದು ಹೆಚ್ಚುವರಿ ತರಗತಿ ಕೊಠಡಿಯ ನಿರ್ಮಾಣಕ್ಕಾಗಿ ರೂ.7 ಲಕ್ಷ ಅನುದಾನವನ್ನು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾದ (ನಾಮನಿರ್ದೇಶಿತ) ಶ್ರೀಮತಿ ವಿನಿಶಾ ನಿರೋರವರು ನೀಡಿರುತ್ತಾರೆ. ಸದ್ರಿ ಕಟ್ಟಡ ಶಂಕುಸ್ಥಾಪನಾ ಸಮಾರಂಭವು 25-02-2018 ರಂದು ನೆರವೇರಿತು. ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ವಿನಿಶಾ ನಿರೋ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಟ್ರಸ್ಟ್‌ನ ಟ್ರಸ್ಟಿ ಕೆ. ಯಸ್. ಕೃಷ್ಣ ಭಟ್, ಕಾರ್ಯದರ್ಶಿ ಯಸ್. ಚಂದ್ರಶೇಖರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ, ಸದಾಶಿ ಅಳಿಕೆ ಹಾಗೂ ಶಾಲಾ ಅಧ್ಯಾಪಕ ಹಾಗೂ ಅಧ್ಯಾಪಕಿಯವರು ಹಾಜರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ವಿನಿಶಾ ನಿರೋ ನಾವು ಮಾಡುವ ಯಾವುದೇ ಕಾರ್ಯವು ದೇವರ ನಿರ್ಧಾರದಂತೆ ನಡೆಯುತ್ತದೆ, ನಾವು ಬರೀ ನಿಮಿತ್ತ ಮಾತ್ರ. ಒಳ್ಳೆಯ ಕೆಲಸಗಳನ್ನು ಮಾಡಲು ದೇವರ ಪ್ರೇರಣೆಯೇ ನಮಗೆ ಒದಗಿದ ಸೌಭಾಗ್ಯ. ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆಗೆ ನೀತಿವಂತರು ಸತ್‌ಚಾರಿತ್ರ್ಯವಂತರಾಗಿರಬೇಕು. ಆಗಲೇ ಅವರಿಗೆ ನಿಜವಾದ ಬೆಲೆ ಸಮಾಜದಲ್ಲಿ ಸಿಗುತ್ತದೆ. ಪರೀಕ್ಷೆಗೆ ಉತ್ತಮ ರೀತಿಯ ತಯಾರಿಯನ್ನು ಮಾಡಿ ಫಲಿತಾಂಶದ ಕಡೆ ತಲೆ ಕೆಡಿಸದಿರಿ. ಪ್ರಯತ್ನಕ್ಕೆ ನಿಜವಾದ ಪ್ರತಿಫಲ ದೊರೆಯುತ್ತದೆ ಎಂದು ತಿಳಿಸಿದರು.