ಶೇಷ ಮಡಿಯಾಲ ಶ್ರೀ ನಾರಾಯಣ ಭಟ್‍ರವರ ಜನ್ಮ ದಿನಾಚರಣೆ ಹಾಗೂ ಸಂಯುಕ್ತ ವಾರ್ಷಿಕೋತ್ಸವ
ಸ್ಥಳ: ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಗಳು, ಅಳಿಕೆ
ದಿನಾಂಕ : 30-11-2018 ಶುಕ್ರವಾರ
ಸಮಯ : 11:15 ರಿಂದ
ಪರರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸುವ, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ನಮ್ಮಲ್ಲಿ ಮರೆಯಾಗುತ್ತಿದೆ. ಆದರೆ ಅಳಿಕೆ ವಿದ್ಯಾಸಂಸ್ಥೆ ಇಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಪೆÇೀಷಿಸಿ ಚಾರಿತ್ರ್ಯವಂತರಾದ ವ್ಯಕ್ತಿಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ದೇಶದ ನಾಲ್ಕು ಮೂಲೆಗಳಲ್ಲೂ ಸಚ್ಚಾರಿತ್ರ್ಯದ ವ್ಯಕ್ತಿಗಳನ್ನು ನಿರ್ಮಿಸುವ ಇಂತಹ ಸಂಸ್ಥೆಗಳು ಅತ್ಯವಶ್ಯಕ ಮತ್ತು ಇಂತಹ ವಿದ್ಯಾಸಂಸ್ಥೆಗಳಿದ್ದರೆ ನಮ್ಮಲ್ಲೆಂದೂ ನಾಯಕತ್ವದ ಕೊರತೆ ಉಂಟಾಗಲಾರದು. ಸತ್ಯಸಾಯಿ ಬಾಬಾರವರ ಭಕ್ತನಾಗಿ ಕೊನೆಯ ತನಕ ಬಾಳುವಂತೆ ಇಲ್ಲಿಯ ಹಿರಿಯರಿಂದ ನಾನು ಬೇಡುವ ಆಶೀರ್ವಾದ ಎಂಬುದಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಕೆ.ಆರ್. ರಮೇಶ್ ಕುಮಾರ್ ಹೇಳಿದರು.
ನನ್ನ ಮಗನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಈ ವಿದ್ಯಾಸಂಸ್ಥೆಗೆ ನಾನು ಚಿರ ಋಣಿ. ಶಿಸ್ತು ಬದ್ಧ ವಾತಾವರಣವುಳ್ಳ ಅಳಿಕೆ ವಿದ್ಯಾಸಂಸ್ಥೆಯ ಸೇವಕ ನಾನು. ಈಗ ಮಂತ್ರಿಯಾದರೂ ಈ ಸಂಸ್ಥೆಯನ್ನು ಮರೆಯುವುದು ನನ್ನಿಂದ ಸಾಧ್ಯವಿಲ್ಲ. ಇಲ್ಲಿ ವಿದ್ಯಾರ್ಥಿಗಳಾಗುವುದು ಸೌಭಾಗ್ಯ. ಮಡಿಯಾಲ ಅಣ್ಣನವರ ತ್ಯಾಗದಿಂದ ಹುಟ್ಟಿದ ಈ ಸಂಸ್ಥೆ ಇನ್ನಷ್ಟು ಬೆಳೆದು ಬೆಳಗಲಿ ಎಂದು ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ತಿಳಿಸಿದರು.
ದೇಶದ ನಾನಾ ಮೂಲೆಗಳಲ್ಲಿ ಸ್ಥಾಪಿಸಲ್ಪಟ್ಟ ಎಲ್ಲಾ ಸತ್ಯಸಾಯಿ ಶಾಲೆಗಳಿಗೂ ಮಡಿಯಾಲ ಅಣ್ಣನವರು ಹುಟ್ಟು ಹಾಕಿದ ಅಳಿಕೆ ವಿದ್ಯಾಸಂಸ್ಥೆಯೇ ಮೂಲಪ್ರೇರಣೆ. ರಾಜ್ಯದೆಲ್ಲೆಡೆ ಈ ಸಂಸ್ಥೆಯ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು ಎಂದು ಸತ್ಯಸಾಯಿ ಸೇವಾಸಂಸ್ಥೆಗಳ ರಾಜ್ಯಾಧ್ಯಕ್ಷರಾದ ನಾಗೇಶ್ ಜಿ. ಧಾಕಪ್ಪನವರು ತಿಳಿಸಿದರು.
ಒಂದು ಸಂಸ್ಥೆಯಿಂದ ಕರ್ನಾಟಕದೆಲ್ಲೆಡೆಯಿಂದ ಪ್ರಸಿದ್ಧವಾದುದು ಅಳಿಕೆ. ಅಂತಹ ಶಿಸ್ತುಬದ್ಧ ವಿದ್ಯಾಸಂಸ್ಥೆ ಅಳಿಕೆ. ಇದನ್ನು ಸ್ಥಾಪಿಸಿದ ಮಡಿಯಾಲ ಅಣ್ಣನವರು ಪ್ರಾತಃಸ್ಮರಣೀಯರು. ವಿದ್ಯೆಯಿಂದ ಬದುಕು. ಬದುಕಿನಲ್ಲಿ ಭಗವಂತನನ್ನು ಕಾಣುವ ದಾರಿಯನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಕಾರ್ಯದರ್ಶಿ ಚಂದ್ರಶೇಖರ ಭಟ್ ವರದಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಪ್ರಸ್ತಾವನೆ ಸಲ್ಲಿಸಿದರು. ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ಡಾ. ಸಿದ್ದರಾಜು ಯಂ. ರವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ವಿ. ದೈವಜ್ಞ ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಅಶ್ವಿನ್ ರಾಮ್‍ಕುಮಾರ್, ಟ್ರಸ್ಟೀ ಬಿ.ಆರ್. ವಾಸುಕಿ, ಸಂಚಾಲಕ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ಸ್ವಾಗತಿಸಿ, ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ್ ಯಂ. ವಂದಿಸಿ, ಉಪನ್ಯಾಸಕ ಶ್ರೀಧರ್ ಕೆ. ನಿರೂಪಿಸಿದರು.