ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಇವರಿಗೆ ಸನ್ಮಾನ ಕಾರ್ಯಕ್ರಮ
ದಿನಾಂಕ : 03-09-2019 ಮಂಗಳವಾರ
ಸಮಯ : ಅಪರಾಹ್ನ 2:30ರಿಂದ
ಸಭಾ ಕಾರ್ಯಕ್ರಮ
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ಪ್ರಕಾಶ್ ವಿ. ದೈವಜ್ಞ ಹಾಗೂ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಳಿಕೆ ಕಾಲೇಜಿನ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಶಾಂತಿ ನಿಲಯಂನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ| ಆರ್. ಗಂಗಾಧರ ಶಾಸ್ತ್ರಿಗಳು ವಹಿಸಿದ್ದರು. ಪರ ಹಿತ ರಕ್ಷಣೆಯೇ ಸಂಸ್ಥತಿ. ಉಪಕಾರ ಸ್ಮರಣೆಯೇ ಸಂಸ್ಕಾರ. ತ್ಯಾಗಮಯ ಜೀವನವೇ ಆದರ್ಶ. ಅದನ್ನು ಇಲ್ಲಿ ಕಾಣುತ್ತಿದ್ದೇನೆ. ಸಾಧನೆಗೆ ಬೇಕಾದ ವಾತಾವರಣ ಇಲ್ಲಿದೆ ಅದರ ಸಮರ್ಪಕ ಬಳಕೆಯಾಗಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಖ್ಯಾತ ಉದ್ಯಮಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಉಪಾಧ್ಯಕ್ಷರಾದ ಎಂ. ಪದ್ಮನಾಭ ಪೈ ಮಾತನಾಡುತ್ತಾ ಅಳಿಕೆಯು ಕರಾವಳಿ ಕರ್ನಾಟಕದ ಪ್ರಶಾಂತಿ ನಿಲಯಂ. ಭಕ್ತಿ, ಜ್ಞಾನ, ವೈರಾಗ್ಯದ ತವರು ಎಂದು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿದ ಪ್ರಕಾಶ್ ವಿ. ದೈವಜ್ಞರವರು ಅಳಿಕೆ ನನ್ನ ಮನೆಯಾಗಿದೆ. ಅಳಿಕೆಯ ಮನೆ ಮಗನಾಗಿಯೇ ಇರುತ್ತೇನೆ. ನನಗೆ ಎಲ್ಲವನ್ನೂ ನೀಡಿದೆ. ಬದುಕಿನ ಭದ್ರತೆಯನ್ನು ಇಲ್ಲಿ ಕಂಡುಕೊಂಡೆ ಎಂದು ಹೇಳಿದರು.
ಯಶಸ್ಸಿಗೆ ಸ್ವಪ್ರಯತ್ನ, ಹಿರಿಯರ ಆಶೀರ್ವಾದ ಮತ್ತು ದೇವರ ಅನುಗ್ರಹ ಅಗತ್ಯ. ಅದನ್ನು ನಾನು ಅಳಿಕೆಯಲ್ಲಿ ಕಂಡುಕೊಂಡೆ ಎಂದು ರ್ಯಾಂಕ್ ವಿಜೇತ ಶ್ರೀಕೃಷ್ಣ ಶರ್ಮ ನುಡಿದರು.
ಶ್ರೀಮತಿ ಪ್ರಿಯಾ ಪದ್ಮನಾಭ ಪೈ, ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಸಂಚಾಲಕ ಕೆ.ಎಸ್. ಕೃಷ್ಣ ಭಟ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ| ಸಿದ್ದರಾಜು ಎಂ. ಸ್ವಾಗತಿಸಿ, ಕನ್ನಡ ಉಪನ್ಯಾಸಕರಾದ ಶ್ರೀಧರ್ ಕೆ. ವಂದಿಸಿದರು. ಆಡಳಿತಾಧಿಕಾರಿ ಜನಾರ್ದನ ನಾಯಕ್ ಯಸ್. ಸನ್ಮಾನ ಪತ್ರ ವಾಚಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಯಾದವ ಎನ್. ಕಾರ್ಯಕ್ರಮ ನಿರೂಪಿಸಿದರು.