ಶ್ರೀ ಮಡಿಯಾಲ ನಾರಾಯಣ ಭಟ್ ಜನ್ಮ ದಿನಾಚರಣೆ ಹಾಗೂ ಸತ್ಯಸಾಯಿ ಜನರಲ್ ಆಸ್ಪತ್ರೆಯ ವಿಂಶತಿ ವರ್ಷಾಚರಣೆ
ಶ್ರೀ ಮಡಿಯಾಲ ನಾರಾಯಣ ಭಟ್‌ರವರ ನೀತಿ ಪಾಠಗಳೇ ನನ್ನ ಬದುಕಿಗೆ ಪ್ರೇರಣೆ. ಮೌಲ್ಯಾಧಾರಿತ ವಿಚಾರಗಳ ಮೂಲಕ ಮಕ್ಕಳ ಮತ್ತು ಹಿರಿಯರ ಮನಸ್ಸನ್ನು ಗೆಲ್ಲುತ್ತಿದ್ದರು. ಪರರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸುವ, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ನಮ್ಮಲ್ಲಿ ಮರೆಯಾಗುತ್ತಿದೆ. ಆದರೆ ಅಳಿಕೆ ವಿದ್ಯಾಸಂಸ್ಥೆ ಇಂತಹ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಪೋಷಿಸಿ ಚಾರಿತ್ರ್ಯವಂತರಾದ ವ್ಯಕ್ತಿಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಬೆಂಗಳೂರು ಉದ್ಯಮಿ ಜಯಪಾಲ ಚಂದಾಡಿ ಅಭಿಪ್ರಾಯಪಟ್ಟರು.
ಶ್ರೀ ಮಡಿಯಾಲ ನಾರಾಯಣ ಭಟ್ಟರ 96ನೇ ಜನ್ಮ ದಿನಾಚರಣೆ ಹಾಗೂ ಹಾಗೂ ಸತ್ಯಸಾಯಿ ಜನರಲ್ ಆಸ್ಪತ್ರೆಯ ವಿಂಶತಿ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಮಡಿಯಾಲ ನಾರಾಯಣ ಭಟ್‌ರವರ ತ್ಯಾಗ ಮತ್ತು ನಿಷ್ಠೆಯ ಬಲದಿಂದ ಅಳಿಕೆ ಜಾಗತಿಕ ಕೇಂದ್ರವಾಗಿದೆ. ತಪ್ಪಿನ ಅರಿವಾಗಿ ಕ್ಷಮೆ ಕೇಳಿದರೆ ಜ್ಞಾನೋದಯವಾದಂತೆ ಎಂಬುದು ಅಣ್ಣನವರ ನಿಲುವು. ಅನಗತ್ಯ ವಿಷಯಗಳಿಗೆ ತಲೆ ಹಾಕಬಾರದು ಎಂಬ ಅಣ್ಣನವರ ಒಂದು ಮಾತು ಇವತ್ತಿಗೂ ನನ್ನ ಜೀವನಕ್ಕೆ ಅದ್ಭುತ ಪಾಠ ಎಂಬುದಾಗಿ ಈಶ್ವರ ಭಟ್ ನಗ್ರಿಮೂಲೆ, ನ್ಯಾಯವಾದಿಗಳು ತಿಳಿಸಿದರು.
ಭರತ 14 ವರ್ಷ ನಂದಿ ಗ್ರಾಮದಿಂದ ಅಧಿಕಾರ, ಸ್ಥಾನಮಾನ ಸಕಲೈಶ್ವರ್ಯಗಳಿದ್ದೂ ಅಯೋಧ್ಯೆಯನ್ನು ಆಳಿದಂತೆ ನಾರಾಯಣ ಭಟ್ಟರು ಅಳಿಕೆಯನ್ನು ಋಷಿ ಸದೃಶವಾಗಿ ಆಳಿದರು. ಮಕ್ಕಳು, ಯುವಕರಾದಿಯಾಗಿ ಪ್ರತಿಯೊಬ್ಬ ವ್ಯಕ್ತಿಯ ಜೀವಿತದ ಧ್ಯೇಯ ಒಂದೇ, ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣ. ಮಹಾನ್ ಕರ್ಮಯೋಗಿಯಾಗಿ, ತ್ಯಾಗೇನೈಕೇ ಅಮೃತತ್ವ ಮಾನಷುಃ ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ ಎಂಬಂತೆ ಬಾಳಿ ಅಜರಾಮರರಾಗಿದ್ದಾರೆ ಎಂದು ಬಿ. ಪದ್ಮನಾಭ ಭಟ್ ಮಡಿಯಾಲ ನಾರಾಯಣ ಭಟ್ಟರ ಒಡನಾಡಿ ಮತ್ತು ನಿವೃತ್ತ ಪ್ರೌಢಶಾಲಾ ಅಧ್ಯಾಪಕರು, ಅಳಿಕೆ ಮಾತನಾಡಿದರು.
ಶ್ರೀ ಸತ್ಯಸಾಯಿ ಜನರಲ್ ಆಸ್ಪತ್ರೆಯ ವರದಿಯನ್ನು ಚಂದ್ರಶೇಖರ ಭಟ್ ಎಸ್. ಕಾರ್ಯದರ್ಶಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ವಾಚಿಸಿದರು. ಶ್ರೀ ಕೆ.ಯಸ್. ಕೃಷ್ಣ ಭಟ್, ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ಸಭಾಧ್ಯಕ್ಷತೆ ವಹಿಸಿದ್ದರು. ಶಂಕರ ಭಟ್, ಸುಮ ಎಸ್.ಎಸ್. ವೈದ್ಯಾಧಿಕಾರಿಗಳು ಶ್ರೀ ಸತ್ಯಸಾಯಿ ಜನರಲ್ ಆಸ್ಪತ್ರೆ, ಅಳಿಕೆ ಉಪಸ್ಥಿತರಿದ್ದರು. ಜನಾರ್ದನ ನಾಯಕ್ ಯಸ್. ಆಡಳಿತಾಧಿಕಾರಿ, ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ, ಅಳಿಕೆ ಇವರು ಸ್ವಾಗತಿಸಿ, ಧನಂಜಯ ಪಿ., ಇತಿಹಾಸ ಉಪನ್ಯಾಸಕರು, ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ವಂದಿಸಿದರು. ಉಪನ್ಯಾಸಕರಾದ ಯಾದವ ಎನ್. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಪ್ರೀತಮ್, ಅಭಿನವ್ ಶರ್ಮ, ವಿವೇಕ್ ರೈ ನುಡಿನಮನ ಸಲ್ಲಿಸಿದರು. ಮಕ್ಕಳ ಪೋಷಕರು, ವಿದ್ಯಾರ್ಥಿಗಳು, ಅಧ್ಯಾಪಕರು, ಕಾರ್ಯಕರ್ತರು, ಊರಿನ ಮಹನೀಯರು, ಅಳಿಕೆ ಗ್ರಾಮ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.