ಶಾರದಾ ವಿಗ್ರಹದ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಸತ್ಯಸಾಯಿ ಪೂಜಾ ಕಾರ್ಯಕ್ರಮ
ವೇದಮೂರ್ತಿ ಶ್ರೀ ಮಂಜಳಗಿರಿ ಉದನೇಶ್ವರ ಭಟ್ ರವರ ನೇತೃತ್ವದಲ್ಲಿ ಶಾರದಾ ವಿಹಾರದಲ್ಲಿ ನೂತನವಾಗಿ ನಿರ್ಮಿಸಿದ ಶಾರದಾ ಮಂದಿರದಲ್ಲಿ ಗಣ ಹೋಮದೊಂದಿಗೆ ವಿದ್ಯಾಮಾತೆ ಶಾರದೆಯ ವಿಗ್ರಹ ಪ್ರತಿಷ್ಠಾಪನೆ, ಶಾರದಾ ಪೂಜೆ ಹಾಗೂ ಪ್ರೌಢಶಾಲಾ ವಿಭಾಗದ ಶ್ರೀ ಸಾಯಿ ಸಮರ್ಪಣಂ ಪ್ರಾರ್ಥನಾ ಮಂದಿರದಲ್ಲಿ ವಾರ್ಷಿಕ ಸತ್ಯಸಾಯಿ ಪೂಜೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮನಾಭ ಪೈ, ರಾಜ್ಯಾಧ್ಯಕ್ಷರು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ಹಾಗೂ ಶ್ರೀಮತಿ ಪ್ರಿಯಾ ಪೈ ಯವರ ಉಪಸ್ಥಿತಿಯಲ್ಲಿ ಶ್ರೀ ಸತ್ಯಸಾಯಿ ಭಜನಾ ಮಂಡಳಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 2022-23 ಶೈಕ್ಷಣಿಕ ವರ್ಷದ ಬಾಲವಿಕಾಸ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ವಿಶೇಷವಾಗಿ ಈ ಶುಭ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ವಾರ್ಷಿಕ “ಸತ್ಯ ಜ್ಯೋತಿ” ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಯವರು ಮಾತನಾಡುತ್ತಾ ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ದಾಸ್ಯದಿಂದ ಒತ್ತಡದಲ್ಲಿರುವ ಸಂದರ್ಭದಲ್ಲಿ ಭಗವಂತನ ನಾಮ ಸಂಕೀರ್ತನೆ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಜೀವನ ಸುಂದರ. ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ನಡೆನುಡಿಗಳು ಹಾಗೂ ಸೇವಾ ಕಾರ್ಯಗಳು ಜಗತ್ತಿಗೇ ಮಾದರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷರಾದ ಪ್ರಸನ್ನ ಭಟ್, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್, ಆಡಳಿತಾಧಿಕಾರಿ ಜನಾರ್ದನ ನಾಯಕ್, ಮಧುಸೂದನ ಭಟ್, ನೂತನ ಭಜನಾ ಮಂಡಳಿಯ ಕನ್ವೀನರ್ ಬಾಲಕೃಷ್ಣ ರೈ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರಘು ಟಿ.ವೈ ವಂದಿಸಿದರು, ಶಿಕ್ಷಕ ಅಶೋಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.