ಸಮಾಜ ಸೇವೆಯೇ ಮನುಷ್ಯ ಜೀವನದ ಗುರಿ… ಡಾ. ಕಿಶನ್ ಭಾಗವತ್
ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಗಳು, ಅಳಿಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ (ಚಿಲ್ಡ್ರನ್ ಆಫ್ ಸತ್ಯಸಾಯಿ) ಸಮಾವೇಶ ನಡೆಯಿತು. ವೈದಿಕ ಪ್ರಾರ್ಥನೆ ಹಾಗೂ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭ. ಹಿರಿಯ ವಿದ್ಯಾರ್ಥಿ ಗೌರವ್ ಶೆಟ್ಟಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವಿದ್ಯಾಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಐದು ಜನ ಹಿರಿಯ ಕಾರ್ಯಕರ್ತರಾದ ಚೆನ್ನಪ್ಪ ಪೂಜಾರಿ – ಗಾರ್ಡನರ್, ನಾರಾಯಣ ಮಡಿವಾಳ – ದೋಭಿ, ಮಹಾಲಿಂಗ ಭಂಡಾರಿ – ಕ್ಷೌರಿಕ, ಕೃಷ್ಣಪ್ಪ ಗೌಡ – ವಾಹನ ಚಾಲಕ ಹಾಗೂ ಬಾಲಕೃಷ್ಣ ಪಾಟಾಳಿ – ಅಡುಗೆ ಸಹಾಯಕ ಇವರನ್ನು ಗೌರವಿಸಿ ಸನ್ಮಾನಸಲಾಯಿತು. ಹಿರಿಯ ವಿದ್ಯಾರ್ಥಿ ಹಾಗೂ ಆಡಳಿತ ಮಂಡಳಿ ಸದಸ್ಯ ರವೀಂದ್ರ ಸಿ.ಎನ್. ಸನ್ಮಾನಿತರ ಪರಿಚಯ ಮಾಡುತ್ತಾ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿರುವ ಸೇವಾ ಕಾರ್ಯಗಳ ಸೂಕ್ಷ್ಮ ವಿವರಣೆ ನೀಡಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು ತಮ್ಮ ತಮ್ಮ ವಿಭಾಗಗಳ ವರದಿ ವಾಚಿಸಿದರು. ನಿರ್ಗಮಿತ ಅಧ್ಯಕ್ಷ ಡಾ. ಕಿಶನ್ ಭಾಗವತ್ ಈ ಹಿಂದೆ ಮಾಡಿದ ಎಲ್ಲಾ ಯೋಜನೆಗಳ ಬಗ್ಗೆ ಹೇಳುತ್ತಾ, ಮನುಷ್ಯ ಜೀವನದ ಉದ್ದೇಶವೇ ಸಮಾಜ ಸೇವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಕಲಿತ ಶಾಲೆಯ ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುವುದು ಹಿರಿಯ ವಿದ್ಯಾರ್ಥಿಗಳ ಕರ್ತವ್ಯ ಎಂದರು. ನೂತನ ಅಧ್ಯಕ್ಷ ಡಾ. ನರೇಂದ್ರ ಅವರು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ, ಎಲ್ಲರ ಸಹಕಾರ ಕೋರಿದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಹಿರಿಯ ವಿದ್ಯಾರ್ಥಿಗಳ ಸಹಕಾರ ಹಾಗೂ ಸಮರ್ಪಣಾಭಾವ ಸಮಾಜಕ್ಕೆ ಮಾದರಿ ಎಂದು ಎಲ್ಲರಿಗೂ ಆಶೀರ್ವದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್ ಕೃಷ್ಣ ಭಟ್ ವಹಿಸಿ ಎಲ್ಲರಿಗೂ ಶುಭ ಹಾರೈಸಿದರು.
ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಸಲಹೆ ಸೂಚನೆಗಳನ್ನು ನೀಡಿ, ಪೂಜ್ಯ ಅಣ್ಣನವರ ಕನಸಿನಂತೆ ಅಳಿಕೆಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಇಟ್ಟುಕೊಂಡು ಮುಂದುವರೆಯಬೇಕು ಎಂದು ಒಮ್ಮತದ ಅಭಿಪ್ರಾಯ ಮಂಡಿಸಿದರು.. ಮಂಜುನಾಥ ಬಿ. ಯು. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.