70 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾಕೇಂದ್ರದ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಬಹಳ ಭಕ್ತಿ, ಗೌರವ, ಸಂಭ್ರಮ ಸಡಗರದೊಂದಿಗೆ 70 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.
ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯವರಾದ ಯಸ್. ಚಂದ್ರಶೇಖರ ಭಟ್‌ರವರು ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಭಜನಾ ಕಾರ್ಯಕ್ರಮ ನಡೆಯಿತು.ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್‌ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಾದ ವಲ್ಲೀಶ್, ಶ್ರೀಶ ಎಂ.ಎಸ್., ಸುವಿನಕುಮಾರ್ ಹಾಗೂ ರಾಮಪ್ರಕಾಶ ರೈ, ಭಾರತ ದೇಶಕ್ಕೆ ದಕ್ಕಿದ ಸ್ವಾತಂತ್ರ್ಯವನ್ನು ಯಾವ ರೀತಿಯಲ್ಲಿ ಉಳಿಸಿ, ದೇಶದ ಪ್ರಗತಿಗೆ ಏಕತೆಯಿಂದ ಶ್ರಮಿಸಬೇಕೆಂದು ಹೇಳಿದರು. ಕೆಲವು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿ ದೇಶಭಕ್ತಿಯ ಕಿಚ್ಚು ಹಚ್ಚಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೈಸ್ಕೂಲ್ ವಿಭಾಗದ ನಿವೃತ್ತ ಮುಖ್ಯ ಅಧ್ಯಾಪಕಿ ಕು. ಕೆ.ವಿ. ವೆಂಕಟಲಕ್ಷ್ಮೀಯವರು ಭಾರತದ ಮಾಜಿ ಪ್ರಧಾನಿ ಲಾಲ್‌ಬಹದ್ದೂರು ಶಾಸ್ತ್ರಿಯವರ ಉದಾಹರಣೆಯೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಡಿದ ನಾಯಕರ ಸೇವೆ, ತ್ಯಾಗದ ಬಗ್ಗೆ ಹೇಳುತ್ತಾ ಇಂದಿನ ವಿದ್ಯಾರ್ಥಿಗಳೂ ಕೂಡಾ ಶಿಕ್ಷಣ ಪಡೆದು ಮುಂದೆ, ಸಮಾಜಕ್ಕಾಗಿ ಸ್ವಲ್ಪವಾದರೂ ಸೇವೆ ಮಾಡಬೇಕು ಎಂದು ಹೇಳಿ ಹುರಿದುಂಬಿಸಿದರು.
ಸಭಾಧ್ಯಕ್ಷರಾದ ಕೆ.ಎಸ್. ಕೃಷ್ಣ ಭಟ್‌ರವರು ಇಂದಿನ ದಿನಗಳಲ್ಲಿ ಸಿಕ್ಕಿರುವ ಸ್ವಾತಂತ್ರ್ಯದ ದುರುಪಯೋಗ ಪಡಿಸುತ್ತಿರುವ ಬಗ್ಗೆ ಹೇಳುತ್ತಾ, ಧರ್ಮ ಎಂಬುದು ಒಂದು ಜೀವನ ಕ್ರಮವೇ ಹೊರತು, ಅದು ಮತವಲ್ಲ, ಎಲ್ಲರೂ ವಿಶ್ವಮಾನವರಾಗಬೇಕು ಎಂಬ ಸಂದೇಶವನ್ನು ಕೊಟ್ಟರು.
ನಂತರ ವಿದ್ಯಾರ್ಥಿಗಳು ಸ್ವಾತಂತ್ರ್ಯ ವೀರರು ಎಂಬ ನಾಟಕ ಹಾಗೂ ಸಂಗೀತ ರಸಮಂಜರಿಯೊಂದಿಗೆ ಎಲ್ಲರನ್ನೂ ರಂಜಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೆ. ಶ್ರೀಧರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಎಂ. ಶಿವಕುಮಾರ್ ವಂದಿಸಿದರು. ಸಂಸ್ಕೃತ ಉಪನ್ಯಾಸಕರಾದ ವೆಂಕಟಕೃಷ್ಣ ಶರ್ಮರವರು ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆ ಹಾಗೂ ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂಸ್ಥೆಯ ಹಿರಿಯ ಕಾರ್ಯಕರ್ತರು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.