ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 91ನೇ ಜನ್ಮ ದಿನಾಚರಣೆ
ದಿನಾಂಕ : 23-11-2016 ಬುಧವಾರ
ದೇವರನ್ನು ನಾವು ಕಂಡಿಲ್ಲ. ಬಾಬಾರವರ ಮೂಲಕ ದೇವತ್ವವನ್ನೇ ಕಂಡುಕೊಂಡಿದ್ದೇವೆ. ಇಂದು ಸ್ವಾಮಿ ನಮ್ಮೊಂದಿಗಿಲ್ಲ, ನಮ್ಮಲ್ಲಿಯೇ ಇದ್ದಾರೆ. ಸಮಾಜ ಸೇವೆಯ ಮೂಲಕ ಇಡೀ ಲೋಕಕ್ಕೆ ಮಾದರಿಯಾಗಿದ್ದಾರೆ. ಅವರು ಆಯ್ಕೆ ಮಾಡಿಕೊಂಡ ಮೊದಲ ಕ್ಷೇತ್ರ ಶಿಕ್ಷಣ. ಎರಡನೇ ಕ್ಷೇತ್ರ ಆರೋಗ್ಯ. ಇದೇ ತಾನೇ ಆಗಬೇಕಾಗಿರುವುದು? ಇಂದಿನ ಶಿಕ್ಷಣ ಕಡಿಮೆ ಶ್ರಮ, ಅಧಿಕ ಸಂಪಾದನೆ ಭಾವನೆಗಳನ್ನು ಬೆಳೆಸುತ್ತಿದೆ. ತಾನೊಬ್ಬ ಉದ್ದಾರವಾದರೆ ಸಾಕು ಎಂಬ ಸ್ವಾರ್ಥ ಭಾವನೆ ಬೆಳೆಸಿಕೊಂಡಿದ್ದಾರೆ. ಇದು ಬದಲಾಗಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಿ. ದೇಶಕ್ಕಾಗಿ ಏನನ್ನಾದರೂ ಶ್ರೇಷ್ಠ ಕೊಡುಗೆ ನೀಡಬೇಕು. ಇದುವೇ ಸ್ವಾಮಿಗೆ ನಾವು ಸಲ್ಲಿಸುವ ಹುಟ್ಟುಹಬ್ಬದ ಗೌರವ ಎಂದು ಪುತ್ತೂರಿನ ಪ್ರಸಿದ್ಧ ಸರ್ಜನ್ ಡಾ| ಪ್ರಸಾದ್ ಭಂಡಾರಿಯವರು ಭಗವಾನ್ ಬಾಬಾರವರ 91ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಕರೆ ನೀಡಿದರು. ಅವರು ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆ ಆಯೋಜಿಸಿದ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸತ್ಯಸಾಯಿ ಸೇವಾ ಸಂಸ್ಥೆಗಳ ಸಂಚಾಲಕರ ಕರೆಯನ್ವಯ ಇಂದು ವಿಶ್ವದ ಸಹಸ್ರಾರು ಮನೆಗಳಲ್ಲಿ ಸ್ವಾಮಿಯ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ ಎಂಬ ಸಮಾಚಾರವನ್ನು ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷರು ಮಂಗಳೂರಿನ ಪ್ರಸಿದ್ಧ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಪದ್ಮನಾಭ ಪೈಯವರು ತಿಳಿಸಿದರು. ಅವರು ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಸಿದ್ದರು.
ಬಾಬಾರವರು ಸೇವೆ ಮಾತ್ರವಲ್ಲ ರಾಜಕೀಯ ಕ್ಷೇತ್ರಕ್ಕೆ ಶ್ರೇಷ್ಠ ಮಾರ್ಗದರ್ಶಕರಾಗಿದ್ದರು. ಅವರು ಶ್ರೇಷ್ಠ ಮಾನವತಾವಾದಿಯಾಗಿದ್ದರು ಎಂದು ಕರ್ನಾಟಕ ಸರಕಾರದ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯು. ಗಂಗಾಧರ ಭಟ್ ವಹಿಸಿದ್ದರು. ಮಂಗಳೂರಿನ ಪ್ರಿಯಾ ಪೈ, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶೈಲಜಾ ಕೆ. ಭಟ್, ಸಂಚಾಲಕ ಕೆ.ಎಸ್. ಕೃಷ್ಣ ಭಟ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್ ಎಸ್. ವಂದಿಸಿದರು. ಶಿವಕುಮಾರ್ ಯಂ. ಸ್ವಾಗತಿಸಿದರು. ಲೋಕಾಯುಕ್ತ ಕಛೇರಿ ಹಾಸನದ ಪ್ರಭಾಕರ್ ಹೆಚ್.ಜೆ. ಹಾಡಿನ ಮೂಲಕ ರಂಜಿಸಿದರು. ಉಪನ್ಯಾಸಕ ಪಿ. ಪೂವಪ್ಪ ಶೆಟ್ಟಿ ನಿರೂಪಿಸಿದರು.