SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 89ನೇ ಜನ್ಮ ದಿನಾಚರಣೆ

Swami 89th B.Day Photoಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು ೨೩-೧೧೨೦೧೪ರಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೮೯ನೇ ಜನ್ಮ ದಿನಾಚರಣೆಯನ್ನು ಬಹಳ ಭಕ್ತಿ ಹಾಗೂ ಸಡಗರದಿಂದ ನಡೆಸಿದರು. ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಒಂದು ದಿನ ಮುಂಚಿತವಾಗಿಯೇ ವಠಾರ ಶುಚಿತ್ವ, ಅಲಂಕಾರಗಳಲ್ಲಿ ತೊಡಗಿಸಿಕೊಂಡರು. ಜನ್ಮ ದಿನೋತ್ಸವದಂದು ಮುಂಜಾನೆ ೫.೩೦ ಗಂಟೆಗೆ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ನಗರ ಸಂಕೀರ್ತನೆ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ನಂತರ ೯.೩೦ ಗಂಟೆಗೆ ಭಜನೆ, ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಸ್ಥೆಯಲ್ಲಿ ಕಲಿಯುತ್ತಿರುವ ಸುಮಾರು ೧೦೦೦ ವಿದ್ಯಾರ್ಥಿಗಳು, ಮಕ್ಕಳ ಹೆತ್ತವರು ಹಾಗೂ ಗ್ರಾಮಸ್ಥರೆಲ್ಲರೂ ಭಕ್ತಿಯಿಂದ ಪೂಜಾರಾಧನೆಯಲ್ಲಿ ಭಾಗವಹಿಸಿದರು. ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಅಂಬಾತನಯ ಮುದ್ರಾಡಿ, ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಬಗ್ಗೆ ಮಾತನಾಡಿದರು. ಪ್ರತಿಯೊಬ್ಬನೂ ತಾನು ಹುಟ್ಟಿ ಬೆಳೆದ ಸಮಾಜದ ಬಗ್ಗೆ ಅಭಿಮಾನವನ್ನು ತಳೆದು ಅವರ ಸೇವೆಗೆ ಮುಂದಾಗಬೇಕು. ತಂದೆ ತಾಯಿಯರ ಬಗ್ಗೆ ವಿಶೇಷ ಗೌರವವನ್ನು ಇರಿಸಿಕೊಳ್ಳಬೇಕು. ವಿದ್ಯಾಭ್ಯಾಸದಿಂದ ಮನುಷ್ಯನು ನಯ ವಿನಯಗಳನ್ನು ಬೆಳೆಸಿಕೊಳ್ಳಬೇಕೇ ಹೊರತು ಅಹಂಕಾರ ಪಡಬಾರದು. ನೆರೆಯವರೊಡನೆ ದೀನ ದುಃಖಿಗಳೊಂದಿಗೆ ಪ್ರೇಮದಿಂದ ವರ್ತಿಸಿ, ಅವರಿಗೆ ನೆರವು ನೀಡಬೇಕು ಎಂದು ನುಡಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಾತನಾಡುತ್ತಾ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳನ್ನು ಹೇಗೆ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿ ಮಕ್ಕಳಿಗೆ ಶುಭ ಹಾರೈಸಿದರು. ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಬೆಳಗ್ಗಿನ ಕಾರ್ಯಕ್ರಮ ಕೊನೆಗೊಂಡಿತು. ಭಗವಾನ್ ಬಾಬಾರವರ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ಅಳಿಕೆ ಗ್ರಾಮದಿಂದ ಬಂದ ಪ್ರತಿಯೊಬ್ಬರ ಮನೆಗೂ ಒಂದು ಸೀರೆ ಹಾಗೂ ಧೋತಿಯನ್ನು ಹಂಚಲಾಯಿತು. ವಸ್ತ್ರದಾನದ ಪ್ರಯೋಜನವನ್ನು ಸುಮಾರು ೯೦೦ ಮನೆಯವರು ಪಡೆದುಕೊಂಡರು. ಸುಮಾರು ೨೫೦೦ ಜನರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆಯ ಕಾರ್ಯಕ್ರಮದಲ್ಲಿ ಸ್ವಾಮಿಯ ಝೂಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಭಜನೆ, ನಾಮಸಂಕೀರ್ತನೆ ಹಾಗೂ ಭಕ್ತಿ ಗಾಯನ ಮಕ್ಕಳು ನಡೆಸಿಕೊಟ್ಟರು. ಧಾರ್ಮಿಕ ಉಪನ್ಯಾಸವನ್ನು ಪ್ರೌಢಶಾಲಾ ವಿಭಾಗದ ಕನ್ನಡ ಅಧ್ಯಾಪಕರಾದ ಜೆ. ಸದಾಶಿವ ಭಟ್ ನಡೆಸಿದರು. ಹಲವಾರು ಉದಾಹರಣೆಗಳೊಂದಿಗೆ ಸ್ವಾಮಿಯ ಅವತಾರದ ಮಹಿಮೆಗಳನ್ನು ವಿವರಿಸಿದರು. ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಮಾದಕಟ್ಟೆ ಈಶ್ವರ ಭಟ್, ವೈದ್ಯಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.