ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಸರ್ವ ಶಿಕ್ಷಣ ಅಭಿಯಾನ ಸಮೂಹ ಸಂಪನ್ಮೂಲ ಕೇಂದ್ರ ಕನ್ಯಾನ ಹಾಗೂ ಮಿತ್ತನಡ್ಕ ಇದರ 2015-16ನೇ ಸಾಲಿನ ಪ್ರಾಥಮಿಕ ಶಾಲಾ ಮಕ್ಕಳ ಕ್ಲಸ್ಟರ್ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆ ದಿ.7-8-2015ರಂದು ಶುಕ್ರವಾರ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ ಅಳಿಕೆಯಲ್ಲಿ ನಡೆಯಿತು. ಅಳಿಕೆ ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಪ್ರತಿಭೆ ಕಾರಂಜಿಯಂತೆ ಚಿಮ್ಮಲಿ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಅಳಿಕೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ನ್ಯಾಯವಾದಿ ಪದ್ಮನಾಭ ಪೂಜಾರಿಯವರು ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರತಿಭಾ ಕಾರಂಜಿಗೆ ಶುಭವನ್ನು ಕೋರುವುದರೊಂದಿಗೆ ಪಂಚಾಯತ್ ನೆಲೆಯಲ್ಲಿ ಸಹಕರಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಳಿಕೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಈಶ್ವರ ನಾಯ್ಕ್ ಎಸ್. ಸ್ವಾಗತಿಸಿ ಬಿ. ಸತ್ಯನಾರಾಯಣ ಭಟ್ ವಂದಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಕನ್ಯಾನ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ದೇವಪ್ಪ ನಾಯ್ಕ್ ಉಪಸ್ಥಿತರಿದ್ದರು. ದಿನವಿಡೀ ನಡೆದ ಸ್ಪರ್ಧಾ ಕಾರ್ಯಕ್ರಮಕ್ಕೆ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ, ಶಿಕ್ಷಣ ಸಂಯೋಜಕರಾದ ಶ್ರೀಮತಿ ಪುಷ್ಪಾ ಮತ್ತು ಶ್ರೀಮತಿ ಸುಜಾತಾ ಭೇಟಿ ನೀಡಿ ಕಾರ್ಯಕ್ರಮ ವೀಕ್ಷಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಳಿಕೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಮಧುಸೂದನ ಭಟ್, ನಿವೃತ್ತ ಶಿಕ್ಷಕ ಉದನೇಶ್ವರ ಭಟ್, ನಿವೃತ್ತ ಮುಖ್ಯ ಶಿಕ್ಷಕರಾದ ರುಕ್ಮಯ್ಯ ಗೌಡ, ಯೋಗ ಶಿಕ್ಷಕರಾದ ಆನಂದ ಶೆಟ್ಟಿ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಶಿಕ್ಷಕರಾದ ಗೋಪಾಲಕೃಷ್ಣ ಭಟ್ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಯಶಸ್ಸಿಗೆ ಸಹಕರಿಸದ ಸರ್ವರಿಗೂ ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಭಟ್ ವಂದಿಸಿದರು.