ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 13-9-2018 ಗುರುವಾರ
ಸಮಯ : ಅಪರಾಹ್ನ 3:00ರಿಂದ
ಮೌಲ್ಯಗಳೇ ಬದುಕಿನ ಆಧಾರ-ಭರತ್ ಕುಮಾರ್
ನಮ್ಮ ಒಳಗಿರುವ ಪ್ರತಿಭೆಗಳು ಹೊರಬರಬೇಕಾದರೆ ನಾವು ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿರಬೇಕು. ಪ್ರತಿ ಕ್ರೌರ್ಯದ ಹಿಂದೆ ಒಂದು ಪ್ರೇರಣೆ ಇರುತ್ತದೆ. ಬಾಲ್ಯದ ದಿನಗಳಲ್ಲಿ ಉತ್ತಮ ಮೌಲ್ಯಗಳನ್ನು ನೀಡುವ ಜಾಗದಲ್ಲಿ ನಾವಿದ್ದರೆ ಹಿಂಸಾಚಾರಕ್ಕೆ ಅವಕಾಶವಿರುವುದಿಲ್ಲ. ಮೌಲ್ಯಗಳೇ ಬದುಕಿಗೆ ಆಧಾರ ಎಂದು ತುಮಕೂರಿನ ಜಿಲ್ಲಾ ನ್ಯಾಯಾಧೀಶ ಭರತ್ ಕುಮಾರ್ ಕೆ.ಯಸ್. ಹೇಳಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ವತಿಯಿಂದ ಆಯೋಜಿಸಿರುವ ಶ್ರೀ ವಿದ್ಯಾಗಣಪತಿ ಮಹೋತ್ಸವದ ಮೊದಲನೆ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಹಣದ ಹಿಂದೆ ಹೋಗಬೇಡಿ ಗುಣದ ಹಿಂದೆ ಹೋಗಿರಿ. ದುಡಿಯದೆ ಗಳಿಸಿದ ಹಣ ಆಪತ್ತಿಗೆ ಆಹ್ವಾನ. ದುಡಿಮೆಯ ಮಹತ್ವ ಅರಿಯಬೇಕಿದ್ದರೆ ಬಾಲ್ಯದಲ್ಲಿ ಶ್ರಮ ಜೀವ ತಿಳಿದಿರಬೇಕು. ಪರೋಪಕಾರದ ಭಾವನೆಗಳು ನಮ್ಮಲ್ಲಿರಬೇಕು ಎಂದು ಬೆಂಗಳೂರಿನಲ್ಲಿ ಜಿಯಸ್ಟಿಯ ಡೆಪ್ಯುಟಿ ಕಮಿಷನರ್ ಆಗಿರುವ ವರುಣ್ ರಂಗಸ್ವಾಮಿ ಇದೇ ಸಂದರ್ಭ ತಿಳಿಸಿದರು.
ಮಾತು ಹೃದಯದಿಂದ ಬರಬೇಕು. ಪ್ರಕೃತಿಯನ್ನು ಪ್ರೀತಿಸಬೇಕು. ನಮಗೆ ಯಾವುದು ಹಿತವೋ ಅದು ಭಗವಂತನಿಗೆ ತಿಳಿದಿದೆ. ಅವನು ಕೊಟ್ಟದ್ದನ್ನು ಪ್ರೀತಿಯಿಂದ ಸ್ವೀಕರಿಸಿ ಅದು ಒಳ್ಳೆಯದೇ ಆಗಿರುತ್ತದೆ ಎಂದು ಇನ್ನೋರ್ವ ಮುಖ್ಯ ಅತಿಥಿ ಫಿಲಿಪ್ಸ್ ಕಂಪನಿಯ ಪ್ರೊಡಕ್ಟ್ ಮ್ಯಾನೇಜರ್ ತಾಂಡವ ಮೂರ್ತಿ ಹೇಳಿದರು.
ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್. ಸ್ವಾಗತಿಸಿದರು. ಸಂಚಾಲಕ ಕೆ.ಯಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಅಧ್ಯಾಪಕ ಜಗದೀಶ್ ಕೆ. ನಿರೂಪಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕೇಯ ಟಿ.ಯಸ್., ಮೋಹಿತ್ ಯಂ. ಶೇಟ್ ಹಾಡುಗಳನ್ನು ಹಾಡಿದರು. ಅಪರಾಹ್ನ 6:00ರಿಂದ ಸಾಂಸ್ಕೃತಿಕ ವೈಭವ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.