SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಪೂಜ್ಯ ಶ್ರೀ ಯು. ಗಂಗಾಧರ ಭಟ್‍ರವರ ಸಂಸ್ಮರಣೆ ಸಭಾ ಕಾರ್ಯಕ್ರಮ


ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ
ಪೂಜ್ಯ ಶ್ರೀ ಯು. ಗಂಗಾಧರ ಭಟ್‍ರವರ ಸಂಸ್ಮರಣೆ
ಸಭಾ ಕಾರ್ಯಕ್ರಮ
ದಿನಾಂಕ : 27-08-2021ನೇ ಶುಕ್ರವಾರ
ಸಮಯ : ಮಧ್ಯಾಹ್ನ 12-15 ರಿಂದ

ಕಳೆದ 43 ವರ್ಷಗಳಿಂದ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ-ಮುದ್ದೇನಹಳ್ಳಿಯ ಅಧ್ಯಕ್ಷರಾಗಿ ಕೀರ್ತಿಶೇಷರಾದ ಉಳುವಾನ ಗಂಗಾಧರ ಭಟ್ಟರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ದಿನಾಂಕ 27-08-2021ರಂದು ನಡೆಯಿತು.
ಕರ್ನಾಟಕ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷರೂ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‍ನ ಟ್ರಸ್ಟಿಯೂ ಆಗಿರುವ ಪದ್ಮನಾಭ ಪೈಯವರು ಅಳಿಕೆ ವಿದ್ಯಾಸಂಸ್ಥೆಗಳು ಪೂಜ್ಯ ಗಂಗಾಧರ ಭಟ್ಟರ ಆಶಯದಂತೆ, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಗ್ರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ಸಂಸ್ಥೆಯನ್ನು ಇನ್ನೂ ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಅವರ ಮಾರ್ಗದರ್ಶನದಲ್ಲಿ ಪಳಗಿದ ಆಡಳಿತ ಮಂಡಳಿ, ಶಿಕ್ಷಕರು, ಹಿತೈಷಿಗಳು ಕಂಕಣಬದ್ಧರಾಗಿದ್ದಾರೆ. ಹಾಗಾಗಿ ಅವರ ದಿವ್ಯಾತ್ಮಕ್ಕೆ ಸಂತೃಪ್ತಿ ಇರುತ್ತದೆ ಎಂದು ಯು. ಗಂಗಾಧರ ಭಟ್ ಮತ್ತು ಮಾದಕಟ್ಟೆ ಈಶ್ವರ ಭಟ್ಟರ ಸ್ಮೃತಿ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.
ದಿವಂಗತ ಗಂಗಾಧರ ಭಟ್‍ರವರು ನನ್ನ ಗುರುಗಳು. ಮನಸ್ಸಿನಲ್ಲಿ ಏನೇ ಬೇಸರ, ಒತ್ತಡ ಇದ್ದಾಗ ಅವರಲ್ಲಿ ಬಂದು ಮಾತನಾಡಿದಾಗ ತೃಪ್ತಿಯಾಗುತ್ತಿತ್ತು. ರಾಷ್ಟ್ರಪ್ರೇಮ, ಕರ್ತವ್ಯ ನಿಷ್ಠೆಯಂತಹ ಮೌಲ್ಯಗಳನ್ನು ಶಿಕ್ಷಣದಲ್ಲಿ ಸಮ್ಮಿಳನಗೊಳಿಸಿ, ಸಮಾಜ ಕಟ್ಟಿದ ಈ ಮಹಾನ್ ಸಂತರ ಕನಸು ನನಸಾಗುವ ಕಾರ್ಯ ಇಲ್ಲಿ ಸಾಕಾರಗೊಳ್ಳುತ್ತಿದೆ. ಇದರಿಂದಾಗಿ ಅವರ ಆತ್ಮಕ್ಕೆ ಸದ್ಗತಿ ದೊರೆಯುವುದೆಂದು ಇನ್ನೋರ್ವ ಮುಖ್ಯ ಅತಿಥಿ ಡಾ| ಎಂ.ಕೆ. ಪ್ರಸಾದ್‍ರವರು ನುಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕೆ.ಯಸ್. ಕೃಷ್ಣ ಭಟ್‍ರವರು, ಪೂಜ್ಯರ ಸುದೀರ್ಘ ಒಡನಾಟ, ಪ್ರೀತಿ, ಪ್ರೇಮದ ಬಗ್ಗೆ ಮಾತನಾಡಿದರು. ಅಳಿಕೆ ಸಂಸ್ಥೆಯ ಟ್ರಸ್ಟೀ, ಕಾರ್ಯದರ್ಶಿ ಮತ್ತು ಸಂಚಾಲಕರಾದ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಗಂಗಾಧರ ಭಟ್‍ರವರ ದೂರದೃಷ್ಟಿ, ನಾಯಕತ್ವ, ತ್ಯಾಗ ಸೇವೆಗಳು ಇಂದಿನ ಜನಾಂಗಕ್ಕೆ ಮಾದರಿ ಎಂದು ನುಡಿ ನಮನಗಳನ್ನು ಅರ್ಪಿಸಿದರು. ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಎಂ. ಶಿವಕುಮಾರ್ ಸ್ವಾಗತಿಸಿ, ಆಡಳಿತಾಧಿಕಾರಿ ಜನಾರ್ದನ ನಾಯಕ್ ವಂದಿಸಿದರು. ಪಿಯು ವಿಭಾಗದ ವಾರ್ಡನ್ ಅಶೋಕ ಭಟ್ ನಿರೂಪಿಸಿದರು. ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ಸಂಚಾಲಕರು ಹಾಗೂ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಇದರ ಜಿಲ್ಲಾಧ್ಯಕ್ಷರಾದ ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕರ್ತರು, ಹಿತೈಷಿಗಳು, ಊರಿನ ಮಹನೀಯರು, ಶಿಕ್ಷಕ, ಶಿಕ್ಷಕಿಯರು ಹಾಗೂ ಅಂತರ್ಜಾಲದ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.