69ನೇ ಸ್ವಾತಂತ್ರ್ಯ ದಿನಾಚರಣೆ
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾಕೇಂದ್ರದ ಸಂಯುಕ್ತ ಆಶ್ರಯದಲ್ಲಿ 69ನೇ ಸ್ವಾತಂತ್ರ್ಯ ದಿನಾಚರಣೆಯು ಬಹಳ ವಿಜ್ರಂಭಣೆಯಿಂದ ನೆರವೇರಿತು. ಧ್ವಜವಂದನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ| ಎಂ.ಕೆ. ಪ್ರಸಾದ್ ಭಂಡಾರಿಯವರು ಭಾರತ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದು, ಅದು ಭ್ರಷ್ಟಾಚಾರ ಮುಕ್ತವಾದಾಗ ಮಾತ್ರ ಎಂದು ಹೇಳಿದರು. ಭಾರತ ದೇಶವು ವಿಶ್ವದಲ್ಲೇ ಗುರುವಿನ ಸ್ಥಾನ ಪಡೆಯಲು ಬೇಕಾದ ಎಲ್ಲಾ ಸಂಪನ್ಮೂಲಗಳೂ ಇದ್ದರೂ ಸ್ವಾರ್ಥ ಹಾಗೂ ಧನ ಸಂಪಾದನೆಯೆಂಬ ಗುರಿ ಹೊಂದಿರುವ ಜನಗಳಿಂದ ದೇಶ ಹಾಳಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಕ್ಕಳಿಗೆ ಶುಭಾಶಯ ಕೋರಿದರು. ವಿದ್ಯಾಕೇಂದ್ರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ, ವಿಶೇಷ ಸಾಧನೆ ಮಾಡಿದುದಕ್ಕೆ ವಿದ್ಯಾರ್ಥಿಗಳಿಗೆ ಭಾರತ ಸರಕಾರದಿಂದ ದೊರೆತ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಭಾಧ್ಯಕ್ಷರಾದ ಮಾದಕಟ್ಟೆ ಈಶ್ವರ ಭಟ್‌ರವರು, ಮಕ್ಕಳು ವಿದ್ಯಾರ್ಥಿಗಳಾಗಿರುವಾಗ ಸನ್ಮಾರ್ಗದಲ್ಲಿ ನಡೆದು, ದೇಶದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಬೇಕೆಂದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ರುಧಿರಾಭಿಶೇಕ ಎಂಬ ಚಾರಿತ್ರಿಕ ನಾಟಕ ನಡೆಯಿತು. ವಿದ್ಯಾರ್ಥಿಗಳ ಹಾಡು, ಭಾಷಣ ಹಾಗೂ ಸಮೂಹ ನೃತ್ಯಗಳು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಾಲೇಜು ವಿಭಾಗದ ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ ವಿದ್ಯಾಕೇಂದ್ರದ ಉಪಪ್ರಾಂಶುಪಾಲ ಶಿವಕುಮಾರ್ ಎಂ. ವಂದಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಕೆ. ಶ್ರೀಧರ್ ಹಾಗೂ ವಿದ್ಯಾಕೇಂದ್ರ ಅಧ್ಯಾಪಕ ಕೆ. ಶ್ಯಾಮ ಕಾರ್ಯಕ್ರಮ ನಿರ್ವಹಿಸಿದರು.