ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮಾವೇಶ – 2017
ಸ್ಥಳ: ಸತ್ಯಸಾಯಿ ವಿಹಾರ, ಅಳಿಕೆ
ದಿನಾಂಕ : 24-09-2017 ಆದಿತ್ಯವಾರ
ಎರಡು ಕೈಗಳಿಂದ ಗಳಿಸಿ ಒಂದು ಕೈಯನ್ನು ಸಮಾಜಕ್ಕೆ ಚಾಚಿರಿ
ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಮಾವೇಶ ಅಳಿಕೆಯ ಸತ್ಯಸಾಯಿ ವಿಹಾರದಲ್ಲಿ ಯು. ಗಂಗಾಧರ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರುದ್ರಮುನಿ, ಸೀನಿಯರ್ ಮ್ಯಾನೇಜರ್ ಡೆಲ್ ಕಂಪನಿ ಇವರು ಮಾತನಾಡುತ್ತಾ ಈ ಸಂಸ್ಥೆಯಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವ ಹಳೆ ವಿದ್ಯಾರ್ಥಿಗಳು ಸುಮಾರು 28000ಕ್ಕೂ ಮಿಕ್ಕಿ ಇದ್ದಾರೆ. ಅವರೆಲ್ಲ ಒಂದು ಗುಂಪಿನ ಅಡಿಯಲ್ಲಿ ಒಟ್ಟು ಸೇರುವಂತಾಗಬೇಕು. ತಮ್ಮ ಅನುಭವವನ್ನು ಅಗತ್ಯ ಇದ್ದವರಿಗೆ ನೀಡುವಂತಾಗಬೇಕು. ಇಂಜಿನಿಯರ್‌ಗಳು ಒಂದು ಗುಂಪಾಗಿ ಅಳಿಕೆಯ ಎಲ್ಲ ಹಳೆ ವಿದ್ಯಾರ್ಥಿಗಳು ಉದ್ಯೋಗಾವಕಾಶ, ಕೌಶಲ್ಯಗಳನ್ನು ಹಂಚಿಕೊಳ್ಳುವ ವೇದಿಕೆ ಸಿದ್ದವಾಗಬೇಕು. ಹಾಗೆಯೇ ಡಾಕ್ಟರ‍್ಸ್, ಚಾರ್ಟರ್ಡ್ ಎಕೌಂಟೆಂಟ್ಸ್ ಒಂದುಗೂಡಬೇಕು ಎಂದು ಕರೆ ನೀಡಿದರು.
ನಾವು ಕಲಿತ ಶಾಲೆ 50 ವರ್ಷಗಳ ಹಿಂದಿನ ಕಟ್ಟಡವನ್ನು ಹೊಂದಿದೆ. ಮುಂದಿನ 50 ವರ್ಷಕ್ಕೆ ಬರುವಂತೆ ಹೊಸದೊಂದು ಕಟ್ಟಡವನ್ನು ನಾವು ಹಳೆ ವಿದ್ಯಾರ್ಥಿಗಳು ನೀಡಬೇಕಾಗಿದೆ. ಸುಮಾರು 4 ಕೋಟಿಯ ಕಾರ್ಯ ಯೋಜನೆಯನ್ನು ಕೈಗೆತ್ತಿಕೊಳ್ಳೊಣವೆಂದು ಮೆಡಿಕಲ್ ಪ್ರೊಫೆಸರ್ ಡಾ| ಸುರೇಶ್ ಕೊಡಪಾಲ ತಿಳಿಸಿದರು.
ವಡಾಫೋನ್ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸೋಮಶೇಖರ್ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಬೇಕಾದ ಹಣವನ್ನು ಹೇಗೆ ಸಂಗ್ರಹಿಸಬಹುದೆಂಬ ಮಾಹಿತಿ ನೀಡಿದರು.
ಹಿರಿಯ ವಿದ್ಯಾರ್ಥಿಗಳಾದ ಪುರುಷೋತ್ತಮ, ಡಾ| ಹರ್ಷ ಸುರೇಶ್, ಚಿದಂಬರಂ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ಅಳಿಕೆಯ ವಿದ್ಯಾಸಂಸ್ಥೆಯ ಸಾಧನೆಗಳ ಕಿರು ಪರಿಚಯ ನೀಡಿದರು. ಕಾರ್ಯದರ್ಶಿಗಳಾದ ಎಸ್. ಚಂದ್ರಶೇಖರ ಭಟ್, ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು.
ಬೆಂಗಳೂರು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ| ನರೇಂದ್ರರವರು ಹೃದ್ರೋಗ ಸಂಬಂಧಿ ಕಾಯಿಲೆಗೆ ಅಳಿಕೆಯ ವಿದ್ಯಾರ್ಥಿ, ಹಳೆ ವಿದ್ಯಾರ್ಥಿ, ಅಧ್ಯಾಪಕ ವರ್ಗದವರಿಗೆ ಉಚಿತ ಸೇವೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಪ್ರಶಾಂತ್ ಸ್ವಾಗತಿಸಿದರು, ಡೆಲ್ ಕಂಪನಿಯ ಮುಖ್ಯ ವ್ಯವಸ್ಥಾಪಕ ರುದ್ರಮುನಿಯವರನ್ನು ಮುಂದಿನ ವರ್ಷಕ್ಕೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಿಸ್ಕೋ ಕಂಪನಿಯ ವ್ಯವಸ್ಥಾಪಕರಾದ ಶ್ರೀ ಪ್ರಶಾಂತ್ ಸ್ವಾಗತಿಸಿದರು. ಬೀಮಾ ಯಂ. ವಂದಿಸಿದರು. ಎನ್.ಸಿ. ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.