ಶ್ರೀ ವಿದ್ಯಾಗಣಪತಿ ಮಹೋತ್ಸವ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 01-09-2022 ಗುರುವಾರ
ಸಮಯ : ಅಪರಾಹ್ನ 3:00ರಿಂದ
ಅಳಿಕೆ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಮಾತ್ರ ವಿದ್ಯೆಯ ಜೊತೆಗೆ ಆಧ್ಯಾತ್ಮಿಕತೆ ಒಳಗೊಂಡು ವಿದ್ಯಾರ್ಥಿಗಳಲ್ಲಿನ ಸುಪ್ತ ಶಕ್ತಿಯನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಶಿಕ್ಷಣವು ಈಗಾಗಲೇ ಮನುಷ್ಯನಲ್ಲಿರುವ ಪರಿಪೂರ್ಣತೆಯ ದ್ಯೋತಕವಾಗಿದೆ. ನಮ್ಮ ದೇಹದಲ್ಲಿನ ಪಂಚಕೋಶಗಳನ್ನು ಜಾಗೃತಗೊಳಿಸುವಲ್ಲಿ ಶಿಸ್ತು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ನಮ್ಮ ಗುರಿ ತಲಪುವ ತನಕ ಛಲ ಬಿಡಬಾರದು. ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ವಿರಮಿಸದಿರಿ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಜರಗಿದ ವಿದ್ಯಾಗಣಪತಿ ಮಹೋತ್ಸವದಲ್ಲಿ, ಬೆಂಗಳೂರು ಶ್ರೀ ರಾಮಕೃಷ್ಣ ಯೋಗಾಶ್ರಮದ ಸ್ವಾಮಿ ಯೋಗೇಶ್ವರಾನಂದಜೀ ನುಡಿದರು.
ಅಳಿಕೆಯಲ್ಲಿ ಇದ್ದಾಗ ಇಲ್ಲಿನ ಬೆಲೆ ಮಕ್ಕಳಿಗೆ ಗೊತ್ತಾಗದು. ಅದೇನಿದ್ದರೂ ಸಂಸ್ಥೆ ಬಿಟ್ಟು ಹೋದ ನಂತರ ಗೋಚರವಾಗುತ್ತದೆ. ಇಲ್ಲಿನ ಶಿಸ್ತು, ಸಮಯ ಪಾಲನೆ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು ಏನೇ ಬೈದರೂ ಅದು ನಮ್ಮ ಒಳ್ಳೆಯತನಕ್ಕೆ ಎಂದು ತಿಳಿಯಬೇಕು. ಶಾಶ್ವತವಾದ ಶಾರದೆಯು ಕಲ್ಲಿನ ಮೇಲೆ ಕುಳಿತಿದ್ದು, ಒಮ್ಮೆ ಒಲಿದರೆ ಎಂದೆಂದಿಗೂ ನಮ್ಮೊಂದಿಗಿರುತ್ತಾಳೆ. ಅಂದರೆ ವಿದ್ಯೆಯು ಶಾಶ್ವತವಾಗಿ ಜೀವನದುದ್ದಕ್ಕೂ ಇರುವುದು. ಚಂಚಲೆಯಾದ ಲಕ್ಷ್ಮಿಯು ಕಮಲದ ಮೇಲೆ ಕುಳಿತಿದ್ದು ಬಂದು ಹೋಗುತಿರುವಳು. ಆದ್ದರಿಂದ ನಾವು ವಿದ್ಯೆಯ ಮಹತ್ವವನ್ನು ಅರಿತು ಜೀವನ ನಡೆಸಬೇಕು ಎಂದು ಡಾ. ಆರ್.ಸಿ. ಚೇತನ್, ಅಪರ ಆಯುಕ್ತರು, ಸೆಂಟ್ರಲ್ ಟ್ಯಾಕ್ಸ್ & ಕಸ್ಟಮ್ಸ್, ಬೆಂಗಳೂರು ಇವರು ನುಡಿದರು. ವಿದ್ಯಾರ್ಥಿಗಳಾದ ಅನೂಪ್ಕೃಷ್ಣ ಯಂ., ಶ್ರೇಯಸ್ ಜೆ.ಯಸ್. ಗಣಪತಿಯ ಕುರಿತಾದ ಭಾಷಣ ಮತ್ತು ಪವನ್ ಬಿ.ಯಸ್. ಮತ್ತು ತಂಡದವರು ಹಾಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟಕೃಷ್ಣ ಶರ್ಮ ಸ್ವಾಗತಿಸಿ, ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶಿವಕುಮಾರ್ ಯಂ. ವಂದಿಸಿ, ಉಪನ್ಯಾಸಕರಾದ ಧನಂಜಯ ಪಿ. ನಿರೂಪಿಸಿದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಯಸ್. ಕೃಷ್ಣ ಭಟ್, ಕಾರ್ಯದರ್ಶಿ & ಸಂಚಾಲಕರಾದ ಚಂದ್ರಶೇಖರ ಭಟ್ ಯಸ್., ಆಡಳಿತಾಧಿಕಾರಿ ಜನಾರ್ದನ ನಾಯಕ್ ಯಸ್., ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು.